ಪದೇಪದೇ ಕೇಳುವ ಪ್ರಶ್ನೆಗಳು

ನಮ್ಮ ಶಾಲೆ ಅಥವಾ ಕೋರ್ಸುಗಳ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿವೆಯೆ? ನಿಮ್ಮ ಹೆಚ್ಚಿನ ಪ್ರಶ್ನೆಗಳಿಗೆ ನಮ್ಮ ಎಫ್ ಎ ಕ್ಯು (ಪದೇಪದೇ ಕೇಳುವ ಪ್ರಶ್ನೆಗಳು) ವಿಭಾಗದಲ್ಲಿ ಉತ್ತರ ಪಡೆಯಬಹುದು.

ಆನ್ಲೈನ್ ಶಾಲೆಯ ಬಗ್ಗೆ ಪ್ರಶ್ನೆಗಳು

ಕೋರ್ಸ್ ದಾಖಲಾತಿಯ ಬಗ್ಗೆ ಪ್ರಶ್ನೆಗಳು

ಪಾವತಿಯ ಬಗ್ಗೆ ಪ್ರಶ್ನೆಗಳು

ಕೋರ್ಸ್ ತೆಗೆದುಕೊಳ್ಳುವ ಬಗ್ಗೆ ಪ್ರಶ್ನೆಗಳು

ಪರೀಕ್ಷೆಗಳ ಬಗ್ಗೆ ಪ್ರಶ್ನೆಗಳು

ತಾಂತ್ರಿಕತೆಗೆ ಸಂಬಂಧಿಸಿದ ಪ್ರಶ್ನೆಗಳು

ಬೆಂಬಲಕ್ಕೆ ಸಂಬಂಧಿಸಿದ ಪ್ರಶ್ನೆಗಳು

 


ಆನ್ಲೈನ್ ಶಾಲೆಯ ಬಗ್ಗೆ ಪ್ರಶ್ನೆಗಳು

Q. ಈ ಶಾಲೆಯ ಉದ್ದೇಶವೇನು?

ಯೇಸು ತನ್ನ ಜನರಿಗೆ ಒಂದು ಕೆಲಸವನ್ನು ನೀಡಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ ಉಪದೇಶ ಮಾಡಿರಿ ” (ಮತ್ತಾಯ 28:19, 20; NASB). ಥ್ರೂ ದ ಸ್ಕ್ರಿಪ್ಚರ್ಸ್, ಎಲ್ಲಾ ದೇಶಗಳಲ್ಲಿನ, ಬೈಬಲನ್ನು ಕಲಿಯುವ ಇಚ್ಛೆ ಹೊಂದಿರುವ ಎಲ್ಲರಿಗೂ ಇಡಿ ಬೈಬಲ್ ಅನ್ನು ಕಲಿಸುವ ಕಾರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ.

Q. ತರಗತಿಗಳನ್ನು ಎಲ್ಲಿ ಕಲಿಸಲಾಗುತ್ತದೆ?

ಕೋರ್ಸುಗಳು ಓದುವ ಮಾದರಿಯಲ್ಲಿದ್ದು ಸಂಪೂರ್ಣವಾಗಿ ಆನ್ಲೈನ್ ರೂಪದಲ್ಲಿರುತ್ತವೆ. ನೀವು ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದಲ್ಲಿ, ನೀವು ಎಲ್ಲೇ ಇದ್ದರೂ ಸಹ ಈ ಕೋರ್ಸುಗಳು ನಿಮಗೆ ಲಭ್ಯ.

Q. ಈ ಶಾಲೆ ಕೇವಲ ಬೋಧಕ ತರಬೇತಿ ಪಡೆಯುವವರಿಗೋಸ್ಕರ ಇದೆಯೆ?

ಥ್ರೂ ದ ಸ್ಕ್ರಿಪ್ಚರ್ಸ್,  ಮಜಬೂತಾದ ಮತ್ತು ನಿಖರವಾದ ಬೈಬಲ್ ತಳಹದಿಯನ್ನು ಒದಗಿಸಿದರೂ ಸಹ ನಾವು “ಬೋಧಕ ಶಾಲೆ” ಎಂದು ಗುರುತಿಸಿಕೊಳ್ಳುವ ಉದ್ದೇಶ ಹೊಂದಿಲ್ಲ. ದೇವರ ವಾಕ್ಯದ ಬಗ್ಗೆ ಹೆಚ್ಚಿನದನ್ನು ತಿಳಿಯಲು ಬಯಸುವ ಯಾರೇ ಆದರೂ ಉಪಯೋಗಿಸಲು ಅನುಕೂಲವಾಗುವ ರೀತಿಯಲ್ಲಿ ಈ ಶಾಲೆಯನ್ನು ವಿನ್ಯಾಸ ಮಾಡಲಾಗಿದೆ.

Q.  ಕೋರ್ಸಿನಲ್ಲಿ ದಾಖಲಾತಿ ಹೊಂದಲು ನಾನೊಬ್ಬ ಕ್ರಿಶ್ಚಿಯನ್ ಅಥವಾ ನಿರ್ದಿಷ್ಟ ಧಾರ್ಮಿಕ ಪಂಥಕ್ಕೆ ಸೇರಿದವನಾಗಿರಬೇಕೆ?

ಇಲ್ಲ. ಒಂದೇ ಒಂದು “ಆವಶ್ಯಕತೆ” ಅಂದರೆ ನೀವು ಕಲಿಯಲು ತಯಾರಾಗಿ ಬರುವುದು. “ಕಿವಿಯುಳ್ಳವನು ಕೇಳಲಿ” (ಮತ್ತಾಯ 11:15).

Q. ಈ ಕೋರ್ಸುಗಳಲ್ಲಿ ಯಾವ ಧಾರ್ಮಿಕ ಪಂಥದ ಸಿದ್ಧಾಂತಗಳನ್ನು ಕಲಿಸಲಾಗುತ್ತದೆ?

ಈ ಕೋರ್ಸುಗಳಲ್ಲಿ ಯಾವುದೇ ಧಾರ್ಮಿಕ ಪಂಥ ಅಥವಾ ಪಂಗಡದ ಸಿದ್ಧಾಂತಗಳು, ತಪ್ಪೊಪ್ಪಿಗೆ, ಅಥವಾ ನಂಬಿಕೆಯ ಕುರಿತಾದ ಹೇಳಿಕೆಗಳನ್ನು ಕಲಿಸಲಾಗುವುದಿಲ್ಲ. ಸಂತ ಪೌಲ ಅಪೊಸ್ತಲರು, “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು ಎಂಬುದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ” (1 ಕೊರಿಂಥದವರಿಗೆ 1:10)ಎಂಬುದಾಗಿ ಸೂಚನೆ ನೀಡುತ್ತಾರೆ.  ಯೇಸುಕ್ರಿಸ್ತರ ಸಭೆಯಲ್ಲಿ ಈ ಭೇದಗಳಿರಕೂಡದು ಎಂದಾದರೆ, ನಾವೆಲ್ಲರೂ ಒಂದು ಸಾಮಾನ್ಯ  ತತ್ತ್ವದಡಿ ಒಂದುಗೂಡಬೇಕು:ಅದೆಂದರೆ ಸ್ವತಃ ದೇವರು ನಮಗೆ ನೀಡಿದ ಸಂದೇಶ. ನಮ್ಮ ಕೋರ್ಸುಗಳ ಲೇಖಕರು ಇಂತಹ ಭೇದಗಳನ್ನು ಹುಟ್ಟಿಸುವ ಮನುಷ್ಯರ ಸಂಪ್ರದಾಯಗಳು ಮತ್ತು ಆವಶ್ಯಕತೆಗಳನ್ನು ಬದಿಗೆ ಸರಿಸಿ; ಬೈಬಲಿನಲ್ಲಿ ದೇವರು ನಮಗಾಗಿ ನೀಡಿರುವ ಅಮೂಲ್ಯ ಸಂದೇಶವನ್ನು ಮಾತ್ರ ಕಲಿಸಲು ಬದ್ಧರಾಗಿದ್ದಾರೆ. “ಸದ್ಗುಣಿಗಳಾದ” ಬೆರೋಯರು ಮಾಡಿದಂತೆ ನೀವು ಮಾಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ, ಬೆರೋಯರು “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು” (ಅಪೊಸ್ತಲರ ಕೃತ್ಯಗಳು 17:11).

Q. ಥ್ರೂ ದ ಸ್ಕ್ರಿಪ್ಚರ್ಸ್ ಒಂದು ಅಧಿಕೃತ ಶಾಲೆಯೆ?

ಥ್ರೂ ದ ಸ್ಕ್ರಿಪ್ಚರ್ಸ್ ಅಧಿಕೃತ ಸಂಸ್ಥೆಯಲ್ಲ. ಆದಾಗ್ಯೂ, ಬೈಬಲಿನ ಆಳವಾದ ಜ್ಞಾನದ ಆವಶ್ಯಕತೆ ಇರುವೆಡೆ ಅಥವಾ ಬೈಬಲ್ ಅರಿವಿಗೆ ಮಹತ್ವ ಕೊಡುವ ಕಡೆ ಇಡಿ ಬೈಬಲನ್ನು ಅಧ್ಯಯನ ಮಾಡಿ ಮುಗಿಸಿದ್ದಕ್ಕಾಗಿ ಇವರು ನೀಡುವ ಪ್ರಮಾಣಪತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

Q. ಥ್ರೂ ದ ಸ್ಕ್ರಿಪ್ಚರ್ಸ್ ಕೋರ್ಸ್ ಮುಗಿದಾಗ ಪ್ರಮಾಣಪತ್ರ ನೀಡುತ್ತದೆಯೆ?

ಒಂದು ಕೋರ್ಸ್ ಗುಂಪಿನಲ್ಲಿರುವ ಪ್ರತಿ ಕೋರ್ಸ್ ಮುಗಿದಾಕ್ಷಣ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಕೋರ್ಸ್ ಗುಂಪಿಗೆ ಉದಾಹರಣೆ ಎಂದರೆ ಹೊಸ ಒಡಂಬಡಿಕೆ ಇತಿಹಾಸ, ಇದು ಯೇಸುಕ್ರಿಸ್ತನ ಜೀವನವನ್ನು ಒಳಗೊಂಡಿದೆ, 1; ಯೇಸುಕ್ರಿಸ್ತನ  ಜೀವನ , 2; ಮತ್ತಾಯ 1—13; ಮತ್ತಾಯ 14—28; ಮಾರ್ಕ; ಲೂಕ 1:1—9:50; ಲೂಕ 9:51—24:53; ಯೋಹಾನ 1—10;  ಯೋಹಾನ 11—21; ಅಪೊಸ್ತಲರ ಕೃತ್ಯಗಳು 1—14; ಮತ್ತು ಅಪೊಸ್ತಲರ ಕೃತ್ಯಗಳು 15—28. ಕೋರ್ಸ್ ಗುಂಪುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ,  ಸೆಮಿಸ್ಟರ್ ಅಧ್ಯಯನಗಳು ಪುಟವನ್ನು ನೋಡಿ.

 

Q.  ಥ್ರೂ ದ ಸ್ಕ್ರಿಪ್ಚರ್ಸ್ ಸುವಾರ್ತಾಸೇವೆಗೆ ಪರವಾನಿಗೆ ನೀಡುತ್ತದೆಯೆ?

ಬೈಬಲ್ ಬೋಧನೆಗೆ ಪರವಾನಿಗೆಯ ಆವಶ್ಯಕತೆ ಇರುವುದಿಲ್ಲ, ಮತ್ತು ಥ್ರೂ ದ ಸ್ಕ್ರಿಪ್ಚರ್ಸ್ ಯಾರಿಗೂ ಸುವಾರ್ತಾಸೇವೆ ಮಾಡಲು ಪ್ರಮಾಣಪತ್ರ ನೀಡುವುದಿಲ್ಲ. ಸ್ವತಃ ಬೈಬಲ್ ಒಬ್ಬ ವ್ಯಕ್ತಿಗೆ ದೇವರ ಸೇವೆ ಮಾಡಲು ಪ್ರೇರಣೆ ನೀಡುತ್ತದೆ, ಮತ್ತು ನಾವು ಸಹ ಅದನ್ನೇ ಕಲಿಸುತ್ತೇವೆ. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ, ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು” (2 ತಿಮೊಥಿ 3:16,17)

Q.  ಇಲ್ಲಿ ಬೇರೆ ಕೋರ್ಸುಗಳು ಲಭ್ಯವಿವೆಯೆ?

ಹೊಸ ಕೋರ್ಸುಗಳು ಲಭ್ಯವಾದಂತೆಲ್ಲಾ ಅವುಗಳನ್ನು ಸೇರಿಸಲಾಗುತ್ತದೆ. ನಮ್ಮ ಕನಿಷ್ಠ ಗುರಿ ಏನೆಂದರೆ ಪ್ರಸ್ತುತ ಲಭ್ಯವಿರುವ ಕೋರ್ಸುಗಳಲ್ಲಿರುವಂತೆ ಅದೇ ಪ್ರಕಾರದಲ್ಲಿ ಇಡಿ ಬೈಬಲನ್ನು ನಿರೂಪಿಸುವುದು.

Q.  ಈ ಶಾಲೆ ಬೇರೆ ಭಾಷೆಗಳಲ್ಲಿ ಲಭ್ಯವಿದೆಯೆ?

ಥ್ರೂ ದ ಸ್ಕ್ರಿಪ್ಚರ್ಸ್ ಇಪ್ಪತ್ತಮೂರು ಭಾಷೆಗಳಲ್ಲಿ ಲಭ್ಯವಿದೆ! ಇಂಗ್ಲಿಷ್ ಅಲ್ಲದೆ, ನಾವು ಅರೇಬಿಕ್, ಬೆಂಗಾಲಿ, ಚೈನೀಸ್, ಫ್ರೆಂಚ್, ಜರ್ಮನ್, ಗುಜರಾತಿ, ಹಿಂದಿ, ಇಂಡೋನೇಷ್ಯನ್, ಜಪಾನೀಸ್, ಕನ್ನಡ, ಕೊರಿಯನ್, ಮಲಯಾಳಂ, ಮರಾಠಿ, ನೇಪಾಳಿ, ಪೋರ್ಚುಗೀಸ್, ಪಂಜಾಬಿ, ರಷ್ಯನ್, ಸ್ಪ್ಯಾನಿಷ್, ತಮಿಳು, ತೆಲುಗು, ಉರ್ದು ಮತ್ತು ವಿಯೆಟ್ನಾಮೀಸ್ ಭಾಷೆಗಳಲ್ಲಿ ಸಹ ಕೋರ್ಸುಗಳನ್ನು ನೀಡುತ್ತೇವೆ. ಇಂಗ್ಲಿಷ್‍ನಲ್ಲಿ ಲಭ್ಯವಿರುವ ಎಲ್ಲಾ ಕೋರ್ಸುಗಳು ಮೊದಮೊದಲು ಬೇರೆ ಭಾಷೆಗಳಲ್ಲಿ ಲಭ್ಯವಿರುವುದಿಲ್ಲ, ಏಕೆಂದರೆ ಪ್ರತಿ ಕೋರ್ಸನ್ನು ಅನುವಾದಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೆಲವು ಸಮಯದ ಬಳಿಕ, ಎಲ್ಲಾ ಕೋರ್ಸುಗಳು ಎಲ್ಲಾ ಭಾಷೆಗಳಲ್ಲಿ ಲಭ್ಯವಿರುತ್ತವೆ.

Q.  ನಮ್ಮ ಚರ್ಚ್ ಈ ಶಾಲೆಯ ಉಪಯೋಗವನ್ನು ಹೇಗೆ ಪಡೆದುಕೊಳ್ಳಬಹುದು?

ಪರಿಣಾಮಕಾರಿ ಕಾರ್ಯಯೋಜನೆಗೆ ಅಧ್ಯಯನದ ಸ್ಥಳೀಯ ಘಟಕ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಸಭೆಯಲ್ಲಿ ಸ್ಥಳೀಯ ಥ್ರೂ ದ ಸ್ಕ್ರಿಪ್ಚರ್ಸ್ ಶಾಲೆಯನ್ನು ಅನುಷ್ಠಾನಕ್ಕೆ ತರಲು ಸಲಹೆಗಳಿಗಾಗಿ ನಮ್ಮ      ಶಾಲೆಯನ್ನು ಹೇಗೆ ಆರಂಭಿಸುವುದು ಪುಟವನ್ನು ನೋಡಿ.

Q.  ಥ್ರೂ ದ ಸ್ಕ್ರಿಪ್ಚರ್ಸ್ ಆನ್ಲೈನ್ ಶಾಲೆಯ ಹಿಂದೆ ಬೆಂಬಲವಾಗಿ ನಿಂತವರು ಯಾರು?

ಥ್ರೂ ದ ಸ್ಕ್ರಿಪ್ಚರ್ಸ್ ಇದು ಆರ್ಕನ್ಸಾಸ್‍ನ, ಸೆಯಾರ್ಕಿಯಲ್ಲಿರುವ ಜಾಗತಿಕ ಸುವಾರ್ತಾ ಬೋಧನೆಗೆ ತನ್ನನ್ನು ಸಮರ್ಪಿಸಿಕೊಂಡಿರುವ ಬಹುಮುಖಿ, ಲಾಭಾಪೇಕ್ಷೆಯಿಲ್ಲದ  ಟ್ರೂತ್ ಫಾರ್ ಟುಡೇ ಇವರ ಯೋಜನೆ.

Q.ಕೋರ್ಸಿನ ಬರಹಗಾರರು ಯಾರು?

ಬೈಬಲ್ ಬೋಧನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಕುರಿತು ಓದಲು ನಮ್ಮ ಲೇಖಕರ ಕುರಿತು ಪುಟಕ್ಕೆ ಭೇಟಿ ನೀಡಿ.


 ಕೋರ್ಸ್ ದಾಖಲಾತಿಯ ಬಗ್ಗೆ ಪ್ರಶ್ನೆಗಳು

Q. ಈ ಶಾಲೆಯಲ್ಲಿ ಕೋರ್ಸಿಗೆ ಸೇರಲು ಇರಬೇಕಾದ ಆವಶ್ಯಕತೆಗಳೇನು?

ಯಾವುದೇ  ಷರತ್ತುಗಳಿಲ್ಲ. ನಮ್ಮ ಕೋರ್ಸುಗಳಿಗೆ ಸೇರಲು ಎಲ್ಲರಿಗೂ ಅವಕಾಶವಿದೆ.

Q.  ನಾನು ಯಾವ ಕೋರ್ಸುಗಳಿಗೆ ಸೇರಿಕೊಳ್ಳಬಹುದು?

ಲಭ್ಯವಿರುವ ಯಾವುದೇ ಕೋರ್ಸುಗಳಿಗೆ ಸೇರಲು ನಿಮಗೆ ಆಯ್ಕೆ ಇದೆ. ಬೈಬಲ್‍ನ ನಿರ್ದಿಷ್ಟ ಪುಸ್ತಕವನ್ನು ಓದಬೇಕೆಂಬುದಾಗಿ ನೀವು ಈಗಾಗಲೇ ಮನಸ್ಸಿನಲ್ಲಿ ನಿರ್ಧರಿಸಿಕೊಂಡಿರದಿದ್ದಲ್ಲಿ, ನೀವು ಯೇಸುಕ್ರಿಸ್ತನ ಜೀವನ, 1 ಇಲ್ಲಿಂದ ಆರಂಭಿಸಬೇಕಾಗಿ ನಾವು ಸಲಹೆ ಮಾಡುತ್ತೇವೆ.

Q.  ಪ್ರತಿ ಕೋರ್ಸಿನ ಅವಧಿ ಎಷ್ಟಿರುತ್ತದೆ?

ಒಂದು ನಿರ್ದಿಷ್ಟ ಕೋರ್ಸನ್ನು ಮುಗಿಸಲು ಆ ಕೋರ್ಸಿಗೆ ಪ್ರವೇಶ ಪಡೆದಂದಿನಿಂದ ತೊಡಗಿ 50 ದಿನಗಳ ಕಾಲಾವಕಾಶ ಇರುತ್ತದೆ.

Q.  ಕೋರ್ಸುಗಳು ಯಾವಾಗ ಆರಂಭಗೊಳ್ಳುತ್ತವೆ?

ನೀವು ನಮ್ಮ ಯಾವುದೇ ಒಂದು ಸೆಮಿಸ್ಟರ್ ಅಥವಾ ತ್ರೈಮಾಸಿಕ ಅವಧಿಗಳನ್ನು ಆಯ್ಕೆಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ (ಹೆಚ್ಚಿನ ಮಾಹಿತಿಗೆ   ಸೆಮಿಸ್ಟರ್ ಅಧ್ಯಯನಗಳು ನೋಡಿ), ಆದರೆ ನೀವು ಯಾವುದೇ ಸಮಯದಲ್ಲಿ ಕೋರ್ಸನ್ನು ಆರಂಭಿಸಬಹುದು. ನೀವು ಅಧ್ಯಯನ ಗುಂಪು ಅಥವಾ ಸ್ಥಳೀಯ TTS ಶಾಲೆಯ ಭಾಗವಾಗಿದ್ದಲ್ಲಿ, ಗುಂಪಿನ ಇತರ ಸದಸ್ಯರೊಂದಿಗೆ ಹೊಂದಿಕೊಂಡು ಎಲ್ಲರೂ ಒಂದೇ ಸಮಯದಲ್ಲಿ ಪ್ರವೇಶ ಪಡೆಯಬಹುದು.

Q.  ನಾನು ಕೇವಲ ಒಂದು ಕೋರ್ಸಿಗೆ ಸೇರಬಹುದೆ?

ಹೌದು. ಒಮ್ಮೆ ಆರಂಭಿಸಿದ ಬಳಿಕ ನೀವು ಬೇರೆ ಕೋರ್ಸುಗಳನ್ನು ತೆಗೆದುಕೊಳ್ಳಲು ಬಯಸುವಿರಿ ಎಂಬುದಾಗಿ ನಾವು ಯೋಚಿಸಿದರೂ , ಯಾವಾಗಲೂ ಆಯ್ಕೆ ನಿಮ್ಮದಾಗಿರುತ್ತದೆ; ನೀವು ಯಾವತ್ತೂ ಆಟೋಮ್ಯಾಟಿಕ್ ಆಗಿ ದಾಖಲಾತಿ ಪಡೆಯುವುದಿಲ್ಲ ಮತ್ತು ಯಾವುದೇ ಕೋರ್ಸಿಗೆ ಆಟೋಮ್ಯಾಟಿಕ್ ಆಗಿ ಶುಲ್ಕ ವಿಧಿಸಲಾಗುವುದಿಲ್ಲ.

Q.  ನಾನು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೋರ್ಸುಗಳಿಗೆ ಸೇರಿಕೊಳ್ಳಬಹುದೆ?

ನಮ್ಮ ಸಿಸ್ಟಂ ಒಮ್ಮೆ ಒಂದು ಕೋರ್ಸಿಗೆ ಸೇರಲು ಮಾತ್ರ ಅವಕಾಶ ನೀಡುತ್ತದೆ. ಆದಾಗ್ಯೂ, ಸದ್ಯದ ಕೋರ್ಸ್ ಮುಗಿಯಲು ನೀವು ಎಲ್ಲಾ 50 ದಿನಗಳವರೆಗೆ ಕಾಯಬೇಕೆಂದಿಲ್ಲ. ಒಮ್ಮೆ ನೀವು ಒಂದು ಕೋರ್ಸನ್ನು ಮುಗಿಸಿದ ಬಳಿಕ, ಮುಂದಿನ ಕೋರ್ಸಿಗೆ ಹೋಗಲು ನಿಮಗೆ ಆಯ್ಕೆ ಇರುತ್ತದೆ.

Q.  ನಾನು ಪ್ರತ್ಯೇಕ ಪಠ್ಯಪುಸ್ತಕಗಳನ್ನು ಅಥವಾ ಬೇರೆ ಸಾಮಗ್ರಿಗಳನ್ನು ಪಡೆಯಬೇಕಾದ ಆವಶ್ಯಕತೆ ಇದೆಯೆ?

ಕೋರ್ಸಿಗೆ ಬೇಕಾದ ಎಲ್ಲವನ್ನೂ ನಿಮಗೆ ಒದಗಿಸಲಾಗುವುದು. ನೀವು ಇಂಟರ್ನೆಟ್ ಸಂಪರ್ಕ ಮತ್ತು ಕಲಿಯುವ ಇಚ್ಛೆಯನ್ನು ಹೊಂದಿರಬೇಕು.  ನೀವು ಒಂದು ಬೈಬಲ್ ಇಟ್ಟುಕೊಳ್ಳಬೇಕೆಂದು ನಾವು ಸಲಹೆ ಮಾಡುತ್ತೇವೆ, ಆದರೆ ಪ್ರತಿಯೊಂದು ಅಧ್ಯಯನ ಪಠ್ಯವು ಅಧ್ಯಯನ ಮಾಡಬೇಕಾದ ಸುವಾರ್ತಾ ಭಾಗವನ್ನು ಒಳಗೊಂಡಿರುತ್ತದೆ.

Q.  ವೈಯಕ್ತಿಕ ಆಯ್ಕೆ ಮತ್ತು ಸೆಮಿಸ್ಟರ್ ಅಧ್ಯಯನಗಳ ನಡುವಿನ ವ್ಯತ್ಯಾಸವೇನು?

ವೈಯಕ್ತಿಕ ಆಯ್ಕೆ ಇದು ಯಾವ ಕೋರ್ಸನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈಗಾಗಲೇ ತಿಳಿದಿರುವ ಅಥವಾ ಕೋರ್ಸುಗಳನ್ನು ತಮ್ಮದೇ ಆದ ಕ್ರಮದಲ್ಲಿ ಅನುಸರಿಸುವ ವ್ಯಕ್ತಿಗಳಿಗಾಗಿ ಇದೆ. ಸೆಮಿಸ್ಟರ್ ಅಧ್ಯಯನಗಳು ಈ ಆಯ್ಕೆಯು ಇಡಿ ಬೈಬಲನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ ಮುಗಿಸಲು ಬಯಸುವವರಿಗಾಗಿ ಇದೆ. ಎರಡರಲ್ಲಿ ಇರುವ ನೈಜ ವ್ಯತ್ಯಾಸವೇನೆಂದರೆ ವೈಯಕ್ತಿಕ ಆಯ್ಕೆಯು ನಿಮಗೆ ನಿಮ್ಮ ಮೊದಲ ಕೋರ್ಸನ್ನು ಆರಿಸಲು ಅವಕಾಶ ನೀಡುತ್ತದೆ, ಮತ್ತು ಸೆಮಿಸ್ಟರ್ ಅಧ್ಯಯನಗಳು ನಿಮಗಾಗಿ ಮೊದಲ ಕೋರ್ಸನ್ನು ಆರಿಸುತ್ತವೆ.  ಉಳಿದ ಎಲ್ಲಾ ಅಂಶಗಳಲ್ಲಿ ಅವೆರೆಡೂ ತಾಂತ್ರಿಕವಾಗಿ ಒಂದೇ ಆಗಿರುತ್ತವೆ.  ಬೇರೆ ಬೇರೆ ಅಗತ್ಯಗಳಿರುವ ಮಂದಿ ಶಾಲೆಯನ್ನು ಹೇಗೆ ಉಪಯೋಗಿಸಬಹುದು  ಎಂಬುದನ್ನು ವಿವರಿಸಲು ಬೇರೆ ಬೇರೆ ಶಿಫಾರಸುಗಳ  ಸಮೂಹವಿರುವ ಎರಡು ಆಯ್ಕೆಗಳನ್ನು ನಾವು ನೀಡುತ್ತೇವೆ.

Q.  ನಾನು ವೈಯಕ್ತಿಕ ಆಯ್ಕೆಯಡಿ ಕೋರ್ಸನ್ನು ಆರಂಭಿಸಿದಲ್ಲಿ, ಬಳಿಕ ನಾನು ಸೆಮಿಸ್ಟರ್ ಅಧ್ಯಯನಕ್ಕೆ ಬದಲಾಯಿಸಿಕೊಳ್ಳಬಹುದೆ?

ಬದಲಾಯಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಒಮ್ಮೆ ಒಂದು ಕೋರ್ಸನ್ನು ಮುಗಿಸಿದ ಬಳಿಕ, ಶಾಲೆಯು ಮುಂದಿನ ಕೋರ್ಸಿನ ಬಗ್ಗೆ ಮಾಹಿತಿ ನೀಡುತ್ತದೆ ಜೊತೆಗೆ ನೀವು ಬಯಸಿದಲ್ಲಿ ಬೇರೊಂದು ಕೋರ್ಸನ್ನು ಆರಿಸುವ ಆಯ್ಕೆಯನ್ನು ನೀಡುತ್ತದೆ. ಒಮ್ಮೆ ಒಂದು ಕೋರ್ಸ್ ಗುಂಪಿನಲ್ಲಿರುವ ಎಲ್ಲಾ ಕೋರ್ಸುಗಳು ಮುಗಿದ ಬಳಿಕ ಎರಡೂ ಆಯ್ಕೆಗಳು ಪ್ರಮಾಣಪತ್ರಕ್ಕೆ ಅರ್ಹವಾಗುತ್ತವೆ.

Q.  ನಾನು ಸೆಮಿಸ್ಟರ್ ಅಧ್ಯಯನದೊಂದಿಗೆ ಆರಂಭಿಸಿ, ನಂತರ ಕ್ರಮಾನುಗತಿಯಲ್ಲಿಲ್ಲದ ಬೇರೊಂದು ಕೋರ್ಸನ್ನು ಆರಿಸಿಕೊಳ್ಳಬಹುದೆ?

ಹೌದು. ಪ್ರತಿ ಕೋರ್ಸಿನ ನಂತರ, ಮುಂದಿನ ಕೋರ್ಸಿನ ಬಗ್ಗೆ ಶಾಲೆ ನಿಮಗೆ ಮಾಹಿತಿ ನೀಡುತ್ತದೆ ಜೊತೆಗೆ ನೀವು ಬಯಸಿದಲ್ಲಿ ಬೇರೊಂದು ಕೋರ್ಸನ್ನು ಆರಿಸುವ ಆಯ್ಕೆಯನ್ನು ನೀಡುತ್ತದೆ. ಆಯ್ಕೆಯು ಯಾವಾಗಲೂ ನಿಮ್ಮ ಕೈಯಲ್ಲಿರುತ್ತದೆ.

Q.  ನಾನು ಸೇರಲು ಬಯಸುವ ಸೆಮಿಸ್ಟರ್ ಅಥವಾ ಕ್ವಾರ್ಟರ್ ಪೇಸ್ ಅನ್ನು ನಾನು ಎಲ್ಲಿ ಆಯ್ಕೆ ಮಾಡುವುದು?

ಸೆಮಿಸ್ಟರ್ ಮತ್ತು ತ್ರೈಮಾಸಿಕ ಅವಧಿಗಳು (ಸೆಮಿಸ್ಟರ್ ಅಧ್ಯಯನಗಳು ಪುಟದಲ್ಲಿ) ನೀವು ಬಯಸಿದಂತೆ ಅನುಸರಿಸಲು ಇರುವ ಕೇವಲ ಸಲಹೆಗಳಾಗಿವೆ. ನೀವು ಅವುಗಳನ್ನು ವೆಬ್ಸೈಟ್‍ನಲ್ಲಿ ಆಯ್ಕೆ ಮಾಡಬೇಕೆಂದಿಲ್ಲ.

Q.  50-ದಿನಗಳ ಸಮಯ ಮಿತಿಯೊಳಗೆ ನನ್ನ ಕೋರ್ಸನ್ನು ಮುಗಿಸದಿದ್ದಲ್ಲಿ ಏನಾಗುತ್ತದೆ?

50-ದಿನಗಳ ಕೋರ್ಸ್ ಅವಧಿಯೊಳಗೆ ನೀವು ನಿಮ್ಮ ಕೋರ್ಸನ್ನು ಮುಗಿಸದಿದ್ದಲ್ಲಿ, ನೀವು ಕಡಿಮೆ ಬೆಲೆಗೆ 30-ದಿನಗಳ ವಿಸ್ತರಣೆಯನ್ನು ಖರೀದಿಸಬಹುದು. ಆರಂಭಿಕ 50 ದಿನಗಳು ಮುಗಿದಲ್ಲಿ ಮಾತ್ರ ವಿಸ್ತರಣೆ ಅವಧಿಯನ್ನು ಖರೀದಿಸಬಹುದು. ಕೋರ್ಸಿನ ವಿಸ್ತರಣೆ ಅವಧಿಯ ಸಂಖ್ಯೆಗೆ ಮಿತಿ ಇರುವುದಿಲ್ಲ.

Q.  ಕೋರ್ಸನ್ನು ಮುಗಿಸುವ ಮೊದಲೇ ನನ್ನ ಕೋರ್ಸ್ ಆಕ್ಸೆಸ್‍ನ ಅವಧಿ ತೀರಿದಲ್ಲಿ ಏನಾಗುತ್ತದೆ? ಉಳಿದುದನ್ನು ಪೂರ್ತಿಗೊಳಿಸಲು ನಂತರ ನಾನು ಮರಳಿ ಬರಬಹುದೆ?

ಕೋರ್ಸಿನ ಅವಧಿ ಮುಗಿದು ಸ್ವಲ್ಪ ದಿನ ಕಳೆದಿದ್ದರೂ, ನೀವು ಎಲ್ಲಿ ನಿಲ್ಲಿಸಿದ್ದೀರೋ ಅಲ್ಲಿಂದ ಪುನಃ ಆರಂಭಿಸಲು 30-ದಿನಗಳ ವಿಸ್ತರಣೆ ಅವಧಿಯನ್ನು ಖರೀದಿಸುವ ಆಯ್ಕೆ ನಿಮಗಿರುತ್ತದೆ.


 ಪಾವತಿಯ ಬಗ್ಗೆ ಪ್ರಶ್ನೆಗಳು

Q.  ಕೋರ್ಸಿಗೆ ಸೇರಲು ನಾನು ಹಣ ಪಾವತಿಸಬೇಕೆ?

ಹೌದು.  ಥ್ರೂ ದ ಸ್ಕ್ರಿಪ್ಚರ್ಸ್, ಬೈಬಲ್ ಬೋಧನೆ ಮತ್ತು ಸುವಾರ್ತಾಸೇವೆಗೆ ಸಮರ್ಪಿಸಿಕೊಂಡಿರುವ ಲಾಭಾಪೇಕ್ಷೆಯಿಲ್ಲದ  ಟ್ರೂತ್ ಫಾರ್ ಟುಡೇ ಇದರ ಕಾರ್ಯಯೋಜನೆಯಾಗಿದೆ. ಈ ಬೃಹತ್ ಕಾರ್ಯಯೋಜನೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ. ನೀವು ಖರೀದಿಸುವ ಪ್ರತಿ ಕೋರ್ಸಿನಿಂದ, ಈ ಕಾರ್ಯಯೋಜನೆಯನ್ನು ನಿರ್ವಹಿಸಲು ಮತ್ತು ಬೆಂಬಲಿಸಲು, ಹೊಸ ಪಠ್ಯ ಸಾಮಗ್ರಿಯನ್ನು ತಯಾರಿಸಲು, ಮತ್ತು ಪಠ್ಯ ಸಾಮಗ್ರಿಗಳನ್ನು ಅನುವಾದಿಸಲು ಮತ್ತು ಈ ಮೂಲಕ ನೀವು ಅಭ್ಯಸಿಸುವ ಈ ಮಹತ್ವದ ಕೋರ್ಸುಗಳನ್ನು ಇತರ ಭಾಷೆಯನ್ನಾಡುವ ಜನರು ಕಲಿಯಲು ಅವಕಾಶ ಮಾಡಿಕೊಡುವುದಕ್ಕೆ ನೀವು ನಮಗೆ ನೆರವಾಗುತ್ತೀರಿ.

Q.  ಕೋರ್ಸಿಗೆ ಸೇರಲು ಎಷ್ಟು ಹಣ ತಗಲುತ್ತದೆ?

ಪ್ರತಿ ಕೋರ್ಸಿನ ವೆಚ್ಚವನ್ನು “ದಾಖಲಾತಿ” ಬಟನ್‍ನೊಂದಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ, ಮತ್ತು ನೀವು ನೋಡುವ ಬೆಲೆಯೇ ನಾವು ವಿಧಿಸುವ ಬೆಲೆಯಾಗಿರುತ್ತದೆ.  ಪ್ರತಿ ಕೋರ್ಸಿಗೆ ಸೂಚಿಸಿದ ವೆಚ್ಚವನ್ನು ಹೊರತುಪಡಿಸಿ ಬೇರಾವುದೇ ಶುಲ್ಕವನ್ನು ನಾವು ವಿಧಿಸುವುದಿಲ್ಲ.  ಪ್ರಪಂಚದ ಯಾವ ಭಾಗದಿಂದ ನೀವು ನಮ್ಮ ತಾಣವನ್ನು ಆಕ್ಸೆಸ್ ಮಾಡುತ್ತೀರೆಂಬುದನ್ನು ಅವಲಂಬಿಸಿ ವೆಚ್ಚವು ಹೆಚ್ಚುಕಡಿಮೆಯಾಗುತ್ತದೆ. ನಾವು ನಮ್ಮ ಶುಲ್ಕಗಳನ್ನು ನಿರ್ಧರಿಸುವಾಗ ಪ್ರತಿಯೊಂದು ದೇಶದ ಸರಾಸರಿ ಆರ್ಥಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಶೇಷ ಎಚ್ಚರಿಕೆ ವಹಿಸಿದ್ದೇವೆ, ಬೈಬಲನ್ನು ಕಲಿಯಲು ಬಯಸುವ ಯಾರ ಮೇಲೂ ಆರ್ಥಿಕ ಹೊರೆ ಬೀಳದಂತೆ ಈ ಕಾರ್ಯಯೋಜನೆಯ ಶುಲ್ಕಗಳನ್ನು ಸರಿತೂಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರವನ್ನು ನೀವು ಅರಿತುಕೊಳ್ಳಬೇಕೆಂದು ನಾವು ಬಯಸುತ್ತೇವೆ.

Q.  ಪ್ರತಿ ಕೋರ್ಸಿಗೆ ನಾನು ಯಾವಾಗ ಹಣ ಪಾವತಿಸಬೇಕು?

ಕೋರ್ಸಿಗೆ ಸೇರಲು ನೀವು ಸಿದ್ಧರಾದಾಗ ನೀವು ಪ್ರತಿ ಕೋರ್ಸಿಗೆ ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ. ನೀವು ಆಟೋಮ್ಯಾಟಿಕ್ ಆಗಿ ಕೋರ್ಸುಗಳಿಗೆ ಸೇರ್ಪಡೆ ಹೊಂದಲು ಸಾಧ್ಯವಿಲ್ಲ ಅಥವಾ ಬೇರೆ ಕೋರ್ಸುಗಳಿಗೆ ಆಟೋಮ್ಯಾಟಿಕ್ ಆಗಿ ನಿಮ್ಮಿಂದ ಯಾವತ್ತೂ ಹಣಪಡೆಯಲಾಗುವುದಿಲ್ಲ.

Q.  ಹಣ ಪಾವತಿಗೆ ಯಾವ ವಿಧಾನಗಳು ಲಭ್ಯವಿವೆ?

ನಾವು ವೀಸಾ, ಮಾಸ್ಟರ್ ಕಾರ್ಡ್, ಅಮೇರಿಕನ್ ಎಕ್ಸ್ಪ್ರೆಸ್, ಜೆಸಿಬಿ, ಡಿಸ್ಕವರ್, ಮತ್ತು ಡೈನರ್ಸ್ ಕ್ಲಬ್ ಕಾರ್ಡ್‍ಗಳನ್ನು ಸ್ವೀಕರಿಸುತ್ತೇವೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಈ ಕೆಳಗಿನ ಯಾವುದೇ ಲೋಗೋ ಹೊಂದಿದ್ದಲ್ಲಿ, ಈ ಕೋರ್ಸುಗಳಿಗೆ ದಾಖಲಾತಿ ಪಡೆಯಲು ನಿಮ್ಮ ಕಾರ್ಡನ್ನು ಉಪಯೋಗಿಸಬಹುದು:  visa master card amex jcb discover diners

Q.  ಯುಎಸ್ ಡಾಲರ್ ಅಲ್ಲದ ಬೇರೆ ಕರೆನ್ಸಿಯನ್ನು ನಾನು ಉಪಯೊಗಿಸುತ್ತಿದ್ದರೂ ಸಹ ನನ್ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‍ಗಳನ್ನು ಉಪಯೋಗಿಸಬಹುದೆ?

ಹೆಚ್ಚಿನ ಬ್ಯಾಂಕುಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪೆನಿಗಳು ವಿದೇಶಿ ಕರೆನ್ಸಿಯಲ್ಲಿ ಖರೀದಿ ಮಾಡುವ ಅವಕಾಶ ನೀಡುತ್ತವೆ, ಮತ್ತು ನಿಮ್ಮ ಕರೆನ್ಸಿಗೆ ಸರಿತೂಗಿಸಿದ ಮೊತ್ತವನ್ನು ನಿಮ್ಮ ಕಾರ್ಡ್‍ನಿಂದ ಪಡೆಯಲಾಗುತ್ತದೆ. ಬಹುಶಃ ವಿದೇಶಿ ವಿನಿಮಯ ಶುಲ್ಕದ ರೂಪದಲ್ಲಿ ಒಂದು ಸಣ್ಣ ಮೊತ್ತವನ್ನು ನಿಮ್ಮ ಕಾರ್ಡಿನಿಂದ ಹೆಚ್ಚುವರಿಯಾಗಿ ವಸೂಲಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.


ಕೋರ್ಸ್ ತೆಗೆದುಕೊಳ್ಳುವ ಬಗ್ಗೆ ಪ್ರಶ್ನೆಗಳು

Q.  ನಾನು ಕೋರ್ಸ್ ತೆಗೆದುಕೊಳ್ಳುವಾಗ ಏನನ್ನು ನಿರೀಕ್ಷಿಸಬಹುದು?

ಕೋರ್ಸುಗಳು ಓದುವ ರೂಪದಲ್ಲಿದ್ದು, ಡಿಜಿಟಲ್ ಪಠ್ಯಪುಸ್ತಕದ ಮಾದರಿಯಲ್ಲಿರುತ್ತವೆ, ನಾವು ಇವನ್ನು “ಅಧ್ಯಯನ ಪಠ್ಯ” ಎಂದು ಕರೆಯುತ್ತೇವೆ. ನಿಮಗೆ ಕೋರ್ಸ್ ಪೂರ್ತಿಗೊಳಿಸಲು 50 ದಿನಗಳ ಕಾಲಾವಕಾಶ ಇರುತ್ತದೆ, ಆದರೆ ನೀವು ಯಾವ ವೇಗದಲ್ಲಿ ಇದನ್ನು ಪೂರ್ತಿಗೊಳಿಸುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ. ಹೆಚ್ಚಿನ ಮಾಹಿತಿಗೆ, ನಮ್ಮ  ಮಾದರಿ ಕೋರ್ಸ್ ವಿಷಯ ಪುಟವನ್ನು ನೋಡಿ.

Q. ಕೋರ್ಸ್ ವಿಷಯಗಳ ಮಾದರಿ ಲಭ್ಯವಿದೆಯೆ?

ಹೌದು! ನಮ್ಮ  ಮಾದರಿ ಕೋರ್ಸ್ ವಿಷಯ ಪುಟವನ್ನು ನೋಡಿ.

Q.  ಅಧ್ಯಯನ ಪಠ್ಯಗಳು ಯಾವುವು?

ಪ್ರತಿ ಕೋರ್ಸಿನ ಅಧ್ಯಯನ ಪಠ್ಯವು ಡಿಜಿಟಲ್ ಪಠ್ಯಪುಸ್ತಕವಾಗಿದ್ದು PDF ಫೈಲ್ ರೂಪದಲ್ಲಿರುತ್ತದೆ ಮತ್ತು ಇದನ್ನು ಟ್ರೂತ್ ಫಾರ್ ಟುಡೇ ವಿವರಣ ಗ್ರಂಥ ಮಾಲಿಕೆಯ ಯಾವುದಾದರೂ ಒಂದು ಸಂಪುಟದಿಂದ ಆರಿಸಿಕೊಳ್ಳಲಾಗುತ್ತದೆ. 350 ರಿಂದ 700 ಪುಟಗಳ ಮುದ್ರಿತ ರೂಪದಲ್ಲಿರುವ ಈ ಸಂಪುಟಗಳಲ್ಲಿ  ಬೈಬಲ್‍ನ ವಿವರಣೆಗಳು ಮತ್ತು  ಅನ್ವಯಿಸುವಿಕೆಗೆ ಸಂಬಂಧಿಸಿದ ವಿವರಗಳಿವೆ. ಅಧ್ಯಯನ ಪಠ್ಯಗಳು ಅನೇಕ ವರ್ಷಗಳವರೆಗೆ ನಿಮ್ಮ ಧಾರ್ಮಿಕ ವಾಚನಾಲಯದ ಬಹುಮೂಲ್ಯ ಭಾಗವಾಗಿರುತ್ತವೆ.

Q.  ಪ್ರತಿ ಕೋರ್ಸಿನ ಕೊನೆಯಲ್ಲಿ ಅಧ್ಯಯನ ಪಠ್ಯವನ್ನು ಏನು ಮಾಡುವುದು?

ಕೋರ್ಸಿನ ಅವಧಿಯಲ್ಲಿ ನೀವು ಪಡೆದ ಅಧ್ಯಯನ ಪಠ್ಯ ಮತ್ತು ಡೌನ್‍ಲೋಡ್ ಮಾಡಬಹುದಾದ ಇತರ ಪಠ್ಯಸಾಮಗ್ರಿಗಳನ್ನು  ಕೋರ್ಸ್ ಮುಗಿದ ಬಳಿಕ ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು ಮತ್ತು ಉಪಯೋಗಿಸಬಹುದು. ಪ್ರತಿ ಕೋರ್ಸ್ ಮುಗಿಯುವ ಮೊದಲು ಈ ಫೈಲ್‍ಗಳನ್ನು ನಿಮ್ಮ ಕಂಪ್ಯೂಟರಿನಲ್ಲಿ ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

Q.  ಅಧ್ಯಯನ ಪಠ್ಯದ ಮುದ್ರಿತ ಪ್ರತಿ ಪಡೆಯುವುದು ಸಾಧ್ಯವೆ?

ರಟ್ಟು ಹಾಕಿರುವ ಮುದ್ರಿತ ಅಧ್ಯಯನ ಪಠ್ಯಗಳು ಇಂಗ್ಲಿಷ್‍ನಲ್ಲಿ ಮಾತ್ರ ಲಭ್ಯವಿವೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಇಂಗ್ಲಿಷ್‍ನಲ್ಲಿ ಕೋರ್ಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪ್ರತಿ ಕೋರ್ಸಿಗೆ ಡಿಜಿಟಲ್ ಪ್ರತಿಯೊಂದಿಗೆ ಆಟೊಮ್ಯಾಟಿಕ್  ಆಗಿ ಮುದ್ರಿತ ಪುಸ್ತಕವನ್ನೂ ಪಡೆಯುತ್ತಾರೆ.  ಮುದ್ರಿತ ಪುಸ್ತಕದ ವೆಚ್ಚ ಹಾಗೂ ರವಾನೆ ವೆಚ್ಚಗಳು  ಯುಎಸ್ ಕೋರ್ಸಿನ ಶುಲ್ಕದಲ್ಲಿ ಅಡಕವಾಗಿರುತ್ತವೆ.  ನೀವು ಕೋರ್ಸಿಗೆ ದಾಖಲಾತಿ ಪಡೆಯುವಾಗ ನಿಮ್ಮ ರವಾನೆ ವಿಳಾಸವನ್ನು ಒದಗಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. ಕೋರ್ಸಿನ 50 ದಿನಗಳ ಅವಧಿಯು ನೀವು ದಾಖಲಾತಿ ಹೊಂದಿದ ದಿನದಿಂದ ಆರಂಭವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.  ಆದುದರಿಂದ ಅಧ್ಯಯನ ಆರಂಭಿಸುವ ಮೊದಲು ನಿಮ್ಮ ಮುದ್ರಿತ ಪ್ರತಿ ಪಡೆಯುವುದಕ್ಕಾಗಿ ಕಾಯಬೇಡಿ ಎಂಬುದಾಗಿ ನಾವು ನಿಮಗೆ ಸಲಹೆ ನೀಡುತ್ತೇವೆ. ಅಂತಾರಾಷ್ಟ್ರೀಯ ರವಾನೆ ವೆಚ್ಚಗಳು ಅತ್ಯಧಿಕವಾಗಿರುವುದರಿಂದ, ಯುನೈಟೆಡ್ ಸ್ಟೇಟ್ಸ್ ನ ಹೊರಗಿನ ವಿದ್ಯಾರ್ಥಿಗಳು ಡಿಜಿಟಲ್ ಅಧ್ಯಯನ ಪಠ್ಯವನ್ನು ಮಾತ್ರ ಪಡೆಯುತ್ತಾರೆ.   ಅತ್ಯಧಿಕ ರವಾನೆ ವೆಚ್ಚಗಳ ಹೊರತಾಗಿಯೂ ನೀವು ಇಂಗ್ಲಿಷ್‍ನಲ್ಲಿ ಮುದ್ರಿತ ಪ್ರತಿಯನ್ನು ಖರೀದಿಸಲು ಬಯಸಿದಲ್ಲಿ, ನೀವು staff@resourcepublications.net  ಗೆ ಇಮೇಲ್ ಕಳುಹಿಸಿ ಅಥವಾ 1-501-305-1472 ಗೆ ಕರೆಮಾಡಿ (ಫೋನ್ ಸಂಖ್ಯೆಯ ಮೊದಲು ನೀವು ನಿಮ್ಮ ದೇಶದ ಎಕ್ಸಿಟ್ ಕೋಡನ್ನು ಸೇರಿಸಬೇಕಾಗುತ್ತದೆ) ನೀವು  Resource Publications ರವರನ್ನು ಸಂಪರ್ಕಿಸಬಹುದು.

Q.  ನಾನೇ ಸ್ವತಃ ಅಧ್ಯಯನ ಪಠ್ಯದ ಪ್ರತಿಯನ್ನು ಮುದ್ರಿಸಬಹುದೆ?

ನೀವು ನಿಮ್ಮ ಸ್ವಂತ ಬಳಕೆಗೆ ಅಧ್ಯಯನ ಪಠ್ಯದ ಪ್ರತಿಯನ್ನು ಮುದ್ರಿಸಬಹುದು. ನೀವು ಅಧ್ಯಯನ ಪಠ್ಯವನ್ನು ಕಾಪಿ ಮಾಡುವಂತಿಲ್ಲ ಅಥವಾ ಇನ್ನೊಬ್ಬರಿಗೆ ನೀಡುವಂತಿಲ್ಲ. ಪ್ರತಿಯೊಂದು ಅಧ್ಯಯನ ಪಠ್ಯವು ನೂರಾರು ಪುಟಗಳನ್ನು ಒಳಗೊಂಡಿದ್ದು, ಅದನ್ನು ಪ್ರಿಂಟ್ ಮಾಡಲು ಬಹಳಷ್ಟು ಇಂಕ್ ಹಾಗೂ ಪೇಪರ್ ಖರ್ಚಾಗುತ್ತದೆ ಎಂಬುದನ್ನು ಗಮನದಲ್ಲಿಡಿ.

Q.  ಕೋರ್ಸುಗಳಿಗೆ  ಗ್ರೇಡ್‍ಗಳನ್ನು ಹೇಗೆ ನೀಡಲಾಗುತ್ತದೆ?

ಕೋರ್ಸಿನಲ್ಲಿ ನಿಮ್ಮ ಪ್ರಗತಿಯನ್ನು ಐದು ಕಿರುಪರೀಕ್ಷೆಗಳು ಹಾಗೂ ಒಂದು ಅಂತಿಮ ಸಮಗ್ರ ಪರೀಕ್ಷೆಯ ಮೂಲಕ ಅಳೆಯಲಾಗುವುದು. ನಿಮ್ಮ ಕೋರ್ಸಿನ ಅಂತಿಮ ಗ್ರೇಡ್ ಎಲ್ಲಾ ಆರು ಪರೀಕ್ಷೆಗಳ ಸರಾಸರಿಯಾಗಿರುತ್ತದೆ.

Q.  ನನ್ನ ಗ್ರೇಡ್‍ಗಳ ನಕಲು ಪಡೆಯಬಹುದೆ?

ಹೌದು. ನೀವು ಸೈಟ್ ಗೆ ಲಾಗಿನ್ ಆದಾಗ, ವೆಬ್ ಪುಟದ ಬಲಮೇಲ್ತುದಿಯಲ್ಲಿರುವ ನನ್ನ ಖಾತೆ  ಯ ಕೆಳಗೆ ನೀವು ನನ್ನ ಗ್ರೇಡ್‍ಗಳು ಅನ್ನು ಕಾಣುವಿರಿ.

Q.  ಬೇರೆ ವಿದ್ಯಾರ್ಥಿಗಳೊಂದಿಗೆ ನಾನು ಹೇಗೆ ಸಂವಹನ ನಡೆಸಬಹುದು?

ನೀವು ವೆಬ್ಸೈಟ್ ಮೂಲಕ ನೇರವಾಗಿ ಬೇರೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಂತಿಲ್ಲ, ಆದರೆ ನೀವು ಸ್ಥಳೀಯ TTS ಶಾಲೆ ಅಥವಾ ಅಧ್ಯಯನ ಗುಂಪಿನ ವಿದ್ಯಾರ್ಥಿಗಳೊಡನೆ ಸೇರುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಸಲಹೆ ಹಾಗೂ ಮಾರ್ಗದರ್ಶನಗಳಿಗಾಗಿ  ಶಾಲೆಯನ್ನು ಆರಂಭಿಸುವುದು ಹೇಗೆ ಎಂಬುದನ್ನು ನೋಡಿ.


 ಪರೀಕ್ಷೆಗಳ ಬಗ್ಗೆ ಪ್ರಶ್ನೆಗಳು

Q.  ಎಷ್ಟು ಪರೀಕ್ಷೆಗಳಿರುತ್ತವೆ?

ಪ್ರತಿ ಕೋರ್ಸಿಗೆ ಐದು ಕಿರುಪರೀಕ್ಷೆಗಳು ಮತ್ತು ಒಂದು ಸಮಗ್ರ ಅಂತಿಮ ಪರೀಕ್ಷೆ ಇರುತ್ತದೆ.

Q.  ಪ್ರತಿ ಪರೀಕ್ಷೆಯನ್ನು ನಾನು ಯಾವಾಗ ತೆಗೆದುಕೊಳ್ಳುವುದು?

ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಿರ್ದಿಷ್ಟ ಸಮಯ ಎಂಬುದು ಇರುವುದಿಲ್ಲ. ಪ್ರತಿ ವಿಭಾಗದ ಪಠ್ಯ ಸಾಮಗ್ರಿಯನ್ನು ಓದಿ ಅಭ್ಯಸಿಸಿದ ಬಳಿಕ, ನೀವು ಯಾವಾಗ ಸಿದ್ಧವಿರುತ್ತೀರೋ ಆವಾಗ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಎಲ್ಲಾ ಆರು ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಿಮಗೆ 50 ದಿನಗಳ ಅವಕಾಶವಿದೆ ಎಂಬುದನ್ನು ನೆನಪಿನಲ್ಲಿಡಿ. ಗೊತ್ತುಪಡಿಸಲಾದ ಸಮಯಾವಧಿಯೊಳಗೆ ನೀವು ಎಲ್ಲಾ ಆರು ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಗುರಿಯನ್ನು ಸಾಧಿಸಲು ನಾವು ಒಂದು ವೇಳಾಪಟ್ಟಿಯನ್ನು ಒದಗಿಸುತ್ತೇವೆ.

Q.  ಪ್ರತಿ ಪರೀಕ್ಷೆಯಲ್ಲಿ ಎಷ್ಟು ಪ್ರಶ್ನೆಗಳಿರುತ್ತವೆ?

ಪರಿಯೊಂದು ಪರೀಕ್ಷೆಯು ಸುಮಾರು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಅವುಗಳನ್ನು ಸಂಭಾವ್ಯ ಪ್ರಶ್ನೆಗಳ ಒಂದು ದೊಡ್ಡ ಸಮೂಹದಿಂದ ಆರಿಸಲಾಗುತ್ತದೆ.

Q.  ಪರೀಕ್ಷೆಗಳಲ್ಲಿ ಯಾವ ಬಗೆಯ ಪ್ರಶ್ನೆಗಳಿರುತ್ತವೆ?

ಪರೀಕ್ಷಾ ಪ್ರಶ್ನೆಗಳು ಬಹು ಆಯ್ಕೆಯ ಉತ್ತರಗಳು ಮತ್ತು ಸರಿ/ತಪ್ಪು ಪ್ರಶ್ನೆಗಳ ಮಿಶ್ರಣವಾಗಿರುತ್ತದೆ. ಬಹು ಆಯ್ಕೆಯ ಉತ್ತರಗಳ ಪ್ರಶ್ನೆಗಳಲ್ಲಿ, ನಾವು ನಿಮಗೆ ಪ್ರಶ್ನೆಯನ್ನು ಕೇಳುತ್ತೇವೆ ಮತ್ತು ನೀವು ಹಲವು ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಬೇಕಾಗುತ್ತದೆ.  ಸರಿ/ತಪ್ಪು ಪ್ರಶ್ನೆಗಳಲ್ಲಿ, ನಾವೊಂದು ಹೇಳಿಕೆ ನೀಡುತ್ತೇವೆ, ನೀವು ಏನು ಕಲಿತಿರುವಿರಿ ಎಂಬುದನ್ನು ಆಧರಿಸಿ ಹೇಳಿಕೆ ಸರಿಯೋ ತಪ್ಪೋ ಎಂಬುದನ್ನು ನೀವು ನಿರ್ಧರಿಸಬೇಕಾಗುತ್ತದೆ. ಕೆಲವು ಮಾದರಿ ಪ್ರಶ್ನೆಗಳನ್ನು ನೋಡಲು ನಮ್ಮ  ಮಾದರಿ ಕೋರ್ಸ್ ವಿಷಯ ಪುಟವನ್ನು ನೋಡಿ.

Q.  ಪರೀಕ್ಷೆಗಳಲ್ಲಿ ಯಾವ ವಿಷಯದ ಕುರಿತು ಕೇಳಲಾಗುತ್ತದೆ?

ಪ್ರತಿ ವಿಭಾಗದಲ್ಲಿ, ನೀವು ಓದಬೇಕಾದ ಪುಟಗಳನ್ನು ನಿಮಗೆ ನೀಡುತ್ತೇವೆ, ಮತ್ತು ಆ ಪುಟಗಳಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತೇವೆ. ನಿಮಗೆ ಓದಲು ನೀಡಿದ ಪಠ್ಯದಲ್ಲಿರುವ “ಅನ್ವಯ” ಅಥವಾ “ಹೆಚ್ಚುವರಿ ಓದುವಿಕೆ” ಎಂಬ ವಿಭಾಗದಿಂದ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಅಥವಾ ವಿವರಣ ಅಧ್ಯಯನ ಪಠ್ಯವನ್ನು ಹೊರತುಪಡಿಸಿ ಬೇರಾವುದೇ ಕೋರ್ಸ್ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ.  ಸಮಗ್ರ ಪರೀಕ್ಷೆಯು ಎಲ್ಲಾ ಐದು ಕಿರುಪರೀಕ್ಷೆಗಳ ಅದೇ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ.

Q.  ಪರೀಕ್ಷೆಗಳ ಮೌಲ್ಯಮಾಪನವನ್ನು ಯಾವಾಗ ಮಾಡಲಾಗುತ್ತದೆ?

ನೀವು ಪರೀಕ್ಷೆ ಪೂರ್ತಿಗೊಳಿಸಿ “ಉತ್ತರಗಳನ್ನು ಸಲ್ಲಿಸಿ” ಅನ್ನು ಕ್ಲಿಕ್ ಮಾಡಿದ ಕ್ಷಣವೇ ಪರೀಕ್ಷೆಗಳ ಮೌಲ್ಯಮಾಪನ ಮಾಡಲಾಗುವುದು.

Q.  ನಾನು ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳನ್ನು ತಪ್ಪಿಸಿಕೊಂಡೆನು ಎಂಬುದನ್ನು ನೋಡಲು ನನಗೆ ಸಾಧ್ಯವಿದೆಯೆ?

ಹೌದು. ನೀವು ಯಾವ ಪ್ರಶ್ನೆಯನ್ನು ತಪ್ಪಿಸಿಕೊಂಡಿರಿ ಎಂಬುದನ್ನು ನಾವು ಗುರುತಿಸುತ್ತೇವೆ ಏಕೆಂದರೆ ಇದು ನಿಮಗೆ ಕಲಿಯಲು ಇರುವ ಉತ್ತಮ ಅವಕಾಶವಾಗಿರುತ್ತದೆ. ಉತ್ತರ ಸಿಗಬಹುದಾದ ಅಧ್ಯಯನ ಪಠ್ಯದ ಭಾಗಕ್ಕೆ ಪುನಃ ಭೇಟಿ ನೀಡಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.  ಸಮಗ್ರ ಪರೀಕ್ಷೆಯ ಸಂದರ್ಭದಲ್ಲಿ ಅದೇ ಪ್ರಶ್ನೆ ಪುನಃ ಬರಬಹುದು ಎಂಬುದನ್ನು ಸಹ ನೆನಪಿನಲ್ಲಿಡಿ.

Q. ಪರೀಕ್ಷೆಗಳಿಗೆ ಸಮಯ ಮಿತಿ ಇರುತ್ತದೆಯೆ?

ಇಲ್ಲ. ಪ್ರತಿ ಪ್ರಶ್ನೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಬೇಕಾದಷ್ಟು ಸಮಯ ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಹುರಿದುಂಬಿಸುತ್ತೇವೆ.

Q.  ಪರೀಕ್ಷೆಗಳಿಗೆ ತಯಾರಿ ನಡೆಸಲು ನನಗೆ ಅಧ್ಯಯನ ಗೈಡ್ ಇರುತ್ತದೆಯೆ?

ಹೌದು. ಐದು ಅಧ್ಯಯನ ಗೈಡ್‍ಗಳಿದ್ದು ಇವು ಪರೀಕ್ಷೆಯಲ್ಲಿ ನೀವು ತಿಳಿದಿರಬೇಕಾದ ಪ್ರಮುಖ ಪದಗಳು ಮತ್ತು ಪರಿಕಲ್ಪನೆಗಳನ್ನು ಒಳಗೊಂಡಿರುತ್ತವೆ. ಸಮಗ್ರ ಪರೀಕ್ಷೆಗೆ ತಯಾರಿ ನಡೆಸಲು ನೀವು ಎಲ್ಲಾ ಐದು ಅಧ್ಯಯನ ಗೈಡ್‍ಗಳನ್ನು ಅಭ್ಯಸಿಸಬೇಕಾಗುತ್ತದೆ. ಮಾದರಿ ಅಧ್ಯಯನ ಗೈಡ್‍ಗಾಗಿ ನಮ್ಮ  ಮಾದರಿ ಕೋರ್ಸ್ ವಿಷಯ ಪುಟವನ್ನು ನೋಡಿ.

Q.  ಪರೀಕ್ಷೆ ಬರೆಯುವಾಗ ನಾನು ನನ್ನ ಬೈಬಲ್, ನೋಟ್ಸ್, ಅಥವಾ ಇತರ ನೆರವನ್ನು ಬಳಸಬಹುದೆ?

ಇಲ್ಲ, ಪರೀಕ್ಷೆ ಆರಂಭಿಸುವ ಮೊದಲು ನೀವು ನಿಮ್ಮ ಬೈಬಲ್, ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿಯನ್ನು ದೂರವಿಡಬೇಕು.

Q.  ಮುಂದಿನ ವಿಭಾಗಕ್ಕೆ ಹೋಗಲು ನಾನು ಪರೀಕ್ಷೆಯಲ್ಲಿ ಎಷ್ಟು ಅಂಕ ಗಳಿಸಬೇಕು?

ಕೋರ್ಸಿನ ಮುಂದಿನ ಭಾಗಕ್ಕೆ ಹೋಗಲು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕನಿಷ್ಠ 70% ಅಂಕ ಗಳಿಸಬೇಕು. ನೀವು ಪಠ್ಯಕ್ರಮವನ್ನು ಕಲಿಯುವುದು ನಮ್ಮ  ಶಾಲೆಯ ಗುರಿಯಾಗಿರುವುದರಿಂದ, ನೀವು 70% ಕ್ಕಿಂತ ಕಡಿಮೆ ಅಂಕ ಗಳಿಸಿದರೂ ನೀವು ಪುನಃ ಅಧ್ಯಯನ ಕೈಗೊಳ್ಳಬಹುದು ಮತ್ತು ನಂತರ ಪರೀಕ್ಷೆಯನ್ನು ಪುನಃ ತೆಗೆದುಕೊಳ್ಳಬಹುದು. ನೀವು ಪ್ರತಿ ಬಾರಿ ಪರೀಕ್ಷೆ ತೆಗೆದುಕೊಳ್ಳುವಾಗ ಪ್ರಶ್ನೆಗಳನ್ನು ಅನಿರ್ದಿಷ್ಟ ಕ್ರಮದಲ್ಲಿ ಆರಿಸಲಾಗುತ್ತದೆ, ಆದುದರಿಂದ ಕೆಲವು ಪ್ರಶ್ನೆಗಳು ನೀವು ಮೊದಲ ಬಾರಿ ಪರೀಕ್ಷೆ ತೆಗೆದುಕೊಳ್ಳುವಾಗ ಇದ್ದ ಪ್ರಶ್ನೆಗಳಿಗಿಂತ ಭಿನ್ನವಾಗಿರಬಹುದು.  ಮುಂದಿನ ವಿಭಾಗಕ್ಕೆ ಹೋಗುವುದಕ್ಕಾಗಿ ನೀವು ಪರೀಕ್ಷೆಯನ್ನು ಎಷ್ಟು ಬಾರಿಯಾದರೂ ತೆಗೆದುಕೊಳ್ಳಬಹುದು, ಆದರೆ ನೀವು ಪರಿಶ್ರಮಪಟ್ಟು ಓದಿ ಮೊದಲ ಯತ್ನದಲ್ಲೇ ಉತ್ತೀರ್ಣರಾಗಬೇಕಾಗಿ ನಾವು ಪ್ರೋತ್ಸಾಹಿಸುತ್ತೇವೆ ಏಕೆಂದರೆ ನೀವು ಎಷ್ಟು ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದೀರೆಂಬುದನ್ನು ಸಿಸ್ಟಂ ನೆನಪಿನಲ್ಲಿಡುತ್ತದೆ. ನಿಮಗೆ ಸಮಗ್ರ ಪರೀಕ್ಷೆಯನ್ನು ಮರು ತೆಗೆದುಕೊಳ್ಳುವ ಅವಕಾಶ ಇರುವುದಿಲ್ಲ ಎಂಬುದನ್ನು ಗಮನಿಸಿ.

Q.  70% ಅಥವಾ ಹೆಚ್ಚು ಅಂಕಗಳಿಸಿ ಈಗಾಗಲೇ ಉತ್ತೀರ್ಣವಾಗಿರುವ ವಿಷಯದ ಮೇಲೆ ನಾನು ಪುನಃ ಪರೀಕ್ಷೆ ಬರೆಯಬಹುದೆ?

ಇಲ್ಲ. ನೀವು ಒಮ್ಮೆ 70% ಅಂಕದೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅದುವೇ ಅಂತಿಮ ಗ್ರೇಡ್ ಆಗಿರುತ್ತದೆ.

Q.  ಸಮಗ್ರ (comprehensive) ಪರೀಕ್ಷೆಯನ್ನು ನಾನು ಪುನಃ ತೆಗೆದುಕೊಳ್ಳುವುದು ಹೇಗೆ?

ಪಠ್ಯಕ್ರಮವನ್ನು ಕಲಿಯಲು ನೆರವಾಗುವುದಕ್ಕಾಗಿ ನೀವು ಉತ್ತೀರ್ಣರಾಗುವವರೆಗೂ ಕಿರುಪರೀಕ್ಷೆಗಳನ್ನು ಪುನಃ ತೆಗೆದುಕೊಳ್ಳುವ ಅವಕಾಶವನ್ನು ನಾವು ನಿಮಗೆ ನೀಡುತ್ತೇವೆ. ಆದರೆ ನೀವು ಸಮಗ್ರ ಪರೀಕ್ಷೆಯಲ್ಲಿ 70% ಕ್ಕಿಂತ ಕಡಿಮೆ ಗಳಿಸಿದರೂ ನೀವು ಅದನ್ನು ಪುನಃ ತೆಗೆದುಕೊಳ್ಳುವಂತಿಲ್ಲ.  ಈ ಅಂತಿಮ ಪರೀಕ್ಷೆಯು ಕೋರ್ಸಿನಿಂದ ನೀವು ಗಳಿಸಿದ ಜ್ಞಾನವನ್ನು ಅಳತೆಮಾಡುವ ನಿಜವಾದ ಮಾಪಕವಾಗಿರುತ್ತದೆ.

Q.  ಪರೀಕ್ಷೆ ನೀಡುವಾಗ ಕಂಪ್ಯೂಟರ್ ವೈಫಲ್ಯ ಸಂಭವಿಸಿದಲ್ಲಿ ಅಥವಾ ಇಂಟರ್ನೆಟ್ ಸಂಪರ್ಕ ಕಡಿದುಹೋದಲ್ಲಿ ಏನಾಗುತ್ತದೆ?

ಸಮಸ್ಯೆ ಸರಿಯಾದ ಬಳಿಕ ನೀವು ಪರೀಕ್ಷೆಯನ್ನು ಪುನಃ ಆರಂಭಿಸಲು ಸಾಧ್ಯವಿದೆ. ನಿಮ್ಮ ಇಂಟರ್ನೆಟ್ ಸಂಪರ್ಕ ಪದೇಪದೇ ಕೈಕೊಡುತ್ತಿದ್ದಲ್ಲಿ, ನೀವು ಆಫ್‍ಲೈನ್ ನಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ಸಂಪರ್ಕ ಸರಿಯಾದಾಗ ನಿಮ್ಮ ಉತ್ತರಗಳನ್ನು ಸಲ್ಲಿಸಬಹುದು.


 ತಾಂತ್ರಿಕತೆಗೆ ಸಂಬಂಧಿಸಿದ ಪ್ರಶ್ನೆಗಳು

Q.  ಈ ವೆಬ್ಸೈಟ್ ಬಳಸಲು ಬೇಕಾದ ಕನಿಷ್ಠ ಕಂಪ್ಯೂಟರ್ ಆವಶ್ಯಕತೆಗಳೇನು?

ನಮ್ಮ ವೆಬ್ಸೈಟ್ ಅನ್ನು ಇತ್ತೀಚಿನ ಕನಿಷ್ಠ ಮೂರು ಪ್ರಮುಖ ಬ್ರೌಸರ್ ಗಳೊಂದಿಗೆ (ಗೂಗಲ್ ಕ್ರೋಮ್, ಫೈರ್ ಫಾಕ್ಸ್, ಇಂಟರ್ನೆಟ್ ಎಕ್ಸ್ ಪ್ಲೋರರ್, ಒಪೆರಾ ಅಥವಾ ಸಫಾರಿ)  ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.   ನಿಮ್ಮ ಕಂಪ್ಯೂಟರ್ ಇವುಗಳಲ್ಲಿನ ಒಂದು ಬ್ರೌಸರ್ ಜೊತೆಗೆ ಹೊಂದಿಕೊಂಡು ಹೋಗುವುದಾದಲ್ಲಿ, ನೀವು ಆನ್ಲೈನ್ ಶಾಲೆಗೆ ಆಕ್ಸೆಸ್ ಪಡೆಯುವಿರಿ. ಸಾಮಾನ್ಯವಾಗಿ ಹೇಳುವುದಾದರೆ, ನಿಮ್ಮ ಕಂಪ್ಯೂಟರಿನಲ್ಲಿ ಈ ಸೈಟ್‍ನ  ಸಾರ್ವಜನಿಕ ಪುಟಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾದರೆ, ಮತ್ತು ಮಾದರಿ ಕೋರ್ಸ್ ಪಠ್ಯ ಸಾಮಗ್ರಿಗಳು ಪುಟವನ್ನು ಡೌನ್‍ಲೋಡ್ ಮಾಡಲು ಮತ್ತು ವೀಕ್ಷಿಸಲು ನಿಮಗೆ ಸಾಧ್ಯವಾದಲ್ಲಿ, ನೀವು ನಿಮ್ಮ ಕಂಪ್ಯೂಟರ್ ನಿಂದ ಆನ್‍ಲೈನ್ ಶಾಲೆಗೆ ಆಕ್ಸೆಸ್ ಪಡೆಯಲು ನಿಮಗೆ ಸಾಧ್ಯವಾಗುತ್ತದೆ.

Q.  ಇಂಟರ್ನೆಟ್ ಸಂಪರ್ಕದಿಂದ ದೂರವಿರುವಾಗ ನಾನು ಅಭ್ಯಸಿಸಬಹುದೆ?

ಫೈಲ್‍ಗಳನ್ನು ಡೌನ್‍ಲೋಡ್ ಮಾಡಲು, ಪರೀಕ್ಷೆಗಳನ್ನು ತೆಗೆದುಕೊಳ್ಳಲು, ಮತ್ತು ಕೋರ್ಸ್ ಮುಂದುವರಿಸಲು ನೀವು ಇಂಟರ್ನೆಟ್ ಸಂಪರ್ಕ ಹೊಂದಿರಬೇಕಾಗುತ್ತದೆ.  ನೀವು ನಿಮ್ಮ ಹೆಚ್ಚಿನ ಸಮಯವನ್ನು ಅಧ್ಯಯನ ಪಠ್ಯವನ್ನು ಓದಲು ಮತ್ತು ಪರೀಕ್ಷೆಗೆ ಸಿದ್ಧತೆ ನಡೆಸಲು ವ್ಯಯಿಸುವಿರಿ, ನೀವು ಒಮ್ಮೆ ಅಧ್ಯಯನ ಪಠ್ಯ ಹಾಗೂ ನಿರ್ದಿಷ್ಟ ವಿಭಾಗದ ಅಧ್ಯಯನ ಗೈಡನ್ನು ಡೌನ್‍ಲೋಡ್ ಮಾಡಿದ ಬಳಿಕ ಆಫ್‍ಲೈನ್‍ನಲ್ಲಿ ಮುಂದುವರಿಸಬಹುದು.

Q.  ಥ್ರೂ ದ ಸ್ಕ್ರಿಪ್ಚರ್ಸ್‍ನೊಂದಿಗೆ ಅಭ್ಯಸಿಸಲು ನಾನು ನನ್ನ ಟ್ಯಾಬ್ಲೆಟ್ ಅಥವಾ ಮೊಬೈಲ್ ಸಾಧನವನ್ನು ಬಳಸಬಹುದೆ?

ನಮ್ಮ ವೆಬ್ಸೈಟ್ ಅನ್ನು ಇತ್ತೀಚಿನ ಪ್ರಮುಖ ಮೊಬೈಲ್ ಆಪರೇಟಿಂಗ್ ಸಿಸ್ಟಂನ (ಆಂಡ್ರಾಯ್ಡ್ ಮತ್ತು iOS)  ಕನಿಷ್ಠ ಮೂರು ಆವೃತ್ತಿಗಳೊಂದಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.  ಇದಲ್ಲದೆ, ನಿಮಗೆ PDF ಫೈಲುಗಳನ್ನು ವೀಕ್ಷಿಸಲು ಸಾಧ್ಯವಾಗಬೇಕು, ಇದಕ್ಕೆ ಹಲವಾರು ಆಪ್‍ಗಳು (apps) ಲಭ್ಯವಿದ್ದು, ಇವುಗಳಲ್ಲಿ ಕೆಲವು ಉಚಿತವಾಗಿ ದೊರೆಯುತ್ತವೆ.  ನಿಮ್ಮ ಸ್ಮಾರ್ಟ್‍ಫೋನ್ ಅಥವಾ ಟ್ಯಾಬ್ಲೆಟ್ ಈ ಅರ್ಹತೆಗಳನ್ನು ಪೂರೈಸಿದಲ್ಲಿ, ನೀವು ಅದನ್ನು ಈ ಆನ್ಲೈನ್ ಶಾಲೆಗಾಗಿ ಉಪಯೋಗಿಸಿಕೊಳ್ಳಬಹುದು.  ಸಾಮಾನ್ಯವಾಗಿ ಹೇಳುವುದಾದರೆ, ನಿಮ್ಮ ಸಾಧನದಲ್ಲಿ ಈ ಸೈಟ್‍ನ  ಸಾರ್ವಜನಿಕ ಪುಟಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾದರೆ, ಮತ್ತು ಮಾದರಿ ಕೋರ್ಸ್ ಪಠ್ಯ ಸಾಮಗ್ರಿಗಳು ಪುಟವನ್ನು ಡೌನ್‍ಲೋಡ್ ಮಾಡಲು ಮತ್ತು ವೀಕ್ಷಿಸಲು ನಿಮಗೆ ಸಾಧ್ಯವಾದಲ್ಲಿ, ನೀವು ನಿಮ್ಮ ಸಾಧನದಿಂದ ಆನ್‍ಲೈನ್ ಶಾಲೆಗೆ ಆಕ್ಸೆಸ್ ಪಡೆಯಲು ನಿಮಗೆ ಸಾಧ್ಯವಾಗುತ್ತದೆ.

Q.  ನನ್ನ ಖಾತೆಗೆ ಸಂಬಂಧಿಸಿದ ನನ್ನ ಪಾಸ್‍ವರ್ಡ್ ಅಥವಾ ಇಮೇಲ್ ವಿಳಾಸವನ್ನು ನಾನು ಬದಲಿಸಬಹುದೆ?

ನೀವು ನಿಮ್ಮ ಇಮೇಲ್ ವಿಳಾಸ ಅಥವಾ ಪಾಸ್‍ವರ್ಡನ್ನು ಇಲ್ಲಿ ಬದಲಿಸಬಹುದು.

Q.  ಅಧ್ಯಯನ ಪಠ್ಯವನ್ನು ವೀಕ್ಷಿಸಲು ನನಗೆ ಸಾಧ್ಯವಾಗುತ್ತಿಲ್ಲ, ಅಥವಾ ಅದು ಸರಿಯಾಗಿ ಡಿಸ್ಪ್ಲೇ ಆಗುತ್ತಿಲ್ಲ. ನಾನು ಏನು ಮಾಡಬೇಕು?

ಡಿಜಿಟಲ್ ಅಧ್ಯಯನ ಪಠ್ಯಗಳನ್ನು PDF ಫಾರ್ಮ್ಯಾಟ್‍ನಲ್ಲಿ ಒದಗಿಸಲಾಗುತ್ತದೆ. ಈ ಫೈಲ್‍ಗಳನ್ನು ತೆರೆಯಲು ನೀವು PDF ರೀಡರ್ ಅನ್ನು ಹೊಂದಿರಬೇಕಾಗುತ್ತದೆ. PDF ತೆರೆಯಲು ನಿಮಗೆ ಸಮಸ್ಯೆ ಕಂಡುಬಂದಲ್ಲಿ, ಅಥವಾ ಡಿಸ್ಪ್ಲೇ ದೋಷಗಳು ಕಾಣಿಸಿದಲ್ಲಿ ಅಂದರೆ ಪಠ್ಯದ ಜಾಗದಲ್ಲಿ ಬಿಳಿ ಬಾಕ್ಸ್ ಗಳಿದ್ದಲ್ಲಿ, ಅಡೋಬ್ ರೀಡರ್ ನ ಇತ್ತೀಚಿನ ಉಚಿತ ಆವೃತ್ತಿಯನ್ನು ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕಾಗಿ ಸಲಹೆ ನೀಡುತ್ತೇವೆ.

Q.  ವೆಬ್ಸೈಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಾನು ಏನು ಮಾಡಬೇಕು?

ಮೊದಲಿಗೆ, ನೀವು ಗೂಗಲ್ ಕ್ರೋಮ್, ಫಯರ್ ಫಾಕ್ಸ್, ಸಫಾರಿ ಅಥವಾ ಒಪೆರಾದ ಇತ್ತೀಚಿನ ಆವೃತ್ತಿಯನ್ನು ರನ್ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಪದೇಪದೇ ತೊಂದರೆ ಮರುಕಳಿಸಿದಲ್ಲಿ, ನಮ್ಮ ಬೆಂಬಲ ದೋಷದ ಕುರಿತು ದಯವಿಟ್ಟು ವರದಿ ಮಾಡಿ. ನೀವು ದೋಷದ ಕುರಿತು ವರದಿ ಮಾಡುವಾಗ ದಯವಿಟ್ಟು ಸ್ಪಷ್ಟ ಮಾಹಿತಿ ನೀಡಿ. ನೀವು ಬಳಸುತ್ತಿರುವ ಬ್ರೌಸರ್ ಆವೃತ್ತಿ, ಕಂಪ್ಯೂಟರ್ ನ ಆಪರೇಟಿಂಗ್ ಸಿಸ್ಟಂ (ಉದಾಹರಣೆಗೆ, ವಿಂಡೋಸ್ 8 ಅಥವಾ ಮ್ಯಾಕ್ OS 10.10 ಯೊಸೆಮೈಟ್), ಸಮಸ್ಯೆ ಕಾಣಿಸಿಕೊಂಡ ಪುಟದ ವೆಬ್ ವಿಳಾಸ, ಸಮಸ್ಯೆಯ ವಿವರಣೆ, ಮತ್ತು ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾದ ಸಂಗತಿಗಳು ಇವುಗಳ ವಿವರ ನೀಡಿ.

Q.  ನನ್ನ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡಲಾಗುತ್ತಿದೆಯೆ?

ನಿಮ್ಮ ವೈಯಕ್ತಿಕ ಮಾಹಿತಿಯ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಿಮ್ಮ ಕಂಪ್ಯೂಟರಿನಿಂದ ನಮ್ಮ ವೆಬ್ಸೈಟ್‍ಗೆ ಇರುವ ಡೇಟಾ ಸಂಪರ್ಕವು  ಎನ್‍ಕ್ರಿಪ್ಟ್ ಆಗಿರುತ್ತದೆ ಮತ್ತು ಎಸ್ ಎಸ್ ಎಲ್ ಟೆಕ್ನಾಲಜಿಯವರ ಸುಭದ್ರತೆಗೆ ಒಳಪಟ್ಟಿರುತ್ತದೆ. ನಿಮ್ಮ ಹಣಕಾಸು ಮಾಹಿತಿಯು ಯಾವತ್ತೂ ನಮ್ಮ ಸರ್ವರ್ ಗಳಲ್ಲಿ ಸಂಗ್ರಹವಾಗುವುದಿಲ್ಲ, ಮತ್ತು ನಿಮ್ಮ ಹಣಪಾವತಿಯ ವ್ಯವಸ್ಥೆಯನ್ನು ವಿಶ್ವಾಸಾರ್ಹ, ಉದ್ಯಮ-ಪ್ರಮಾಣಿತ ಪೇಮೆಂಟ್ ಪ್ರೊಸೆಸರ್ ಮೂಲಕ ನಿಭಾಯಿಸಲಾಗುವುದು.

 

ಬೆಂಬಲಕ್ಕೆ ಸಂಬಂಧಿಸಿದ ಪ್ರಶ್ನೆಗಳು

Q.  ನಾನು ಅರ್ಧದಲ್ಲಿ ನಿಲ್ಲಿಸಿದ ಕೋರ್ಸನ್ನು ಮರಳಿ ಆರಂಭಿಸುವುದು ಹೇಗೆ?

ನೀವು ಇನ್ನೂ ಲಾಗಿನ್ ಆಗಿರದಿದ್ದಲ್ಲಿ, ಈ ವೆಬ್‍ಪುಟದ  ಬಲ ಮೇಲ್ತುದಿಯಲ್ಲಿನ ಲಾಗಿನ್ ಲಿಂಕ್ ಬಳಸಿ ಲಾಗಿನ್ ಆಗಿ, ಅಥವಾ ನೀವು ಈಗಾಗಲೇ ಲಾಗಿನ್ ಆಗಿದ್ದಲ್ಲಿ, ಈ ವೆಬ್‍ಪುಟದ  ಬಲ ಮೇಲ್ತುದಿಯಲ್ಲಿನ ನನ್ನ ಖಾತೆಯನ್ನು ಕ್ಲಿಕ್ ಮಾಡಿ. ನನ್ನ ಖಾತೆ ಪುಟದಿಂದ, ಕೋರ್ಸ್ ಮುಂದುವರಿಸಿ ಎಂದು ಹೇಳುವ ಕೆಂಪು ಬಟನ್ ಅನ್ನು ಕ್ಲಿಕ್ ಮಾಡಿ. ಇದು ನಿಮ್ಮನ್ನು ನಿಮ್ಮ ಪ್ರಸ್ತುತ ಕೋರ್ಸಿನ ಮೊದಲ ಪುಟಕ್ಕೆ ಒಯ್ಯುತ್ತದೆ. ಅಲ್ಲಿ, ನೀವು ಎಲ್ಲಿ ನಿಲ್ಲಿಸಿದ್ದೀರೋ ಅಲ್ಲಿಂದ ಮುಂದುವರಿಯಬಹುದು.

Q.  ನಾನು ಈಗಾಗಲೇ ಮುಗಿಸಿರುವ ಕೋರ್ಸನ್ನು ಪುನಃ ತೆಗೆದುಕೊಳ್ಳಬಹುದೆ?

ಇಲ್ಲ. ಆದಾಗ್ಯೂ, ನೀವು ಈ ಹಿಂದೆ ಕಲಿತಿರುವುದನ್ನು ನೆನಪಿಸಿಕೊಳ್ಳಲು ನೀವು ಬಯಸಿದಾಗಲೆಲ್ಲಾ ಅಧ್ಯಯನ ಪಠ್ಯಕ್ಕೆ ಮರಳಿ ಭೇಟಿ ನೀಡುವುದನ್ನು ನಾವು ಪ್ರೋತ್ಸಾಹಿಸುತ್ತೇವೆ.

Q.  ನಾನು ನನ್ನ ಅಧ್ಯಯನ ಪಠ್ಯದ ಡಿಜಿಟಲ್ ಪ್ರತಿಯನ್ನು ಕಳೆದುಕೊಂಡಿದ್ದೇನೆ. ನಾನು ಇನ್ನೊಂದು ಪ್ರತಿಯನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವುದು?

ನೀವು ಕೋರ್ಸಿನಲ್ಲಿ ಪ್ರಸ್ತುತ ಇರುವಾಗ ಎಲ್ಲಾ ಕೋರ್ಸ್ ಪಠ್ಯಸಾಮಗ್ರಿಗಳಿಗೆ ನಿಮಗೆ ಸಂಪೂರ್ಣ ಆಕ್ಸೆಸ್ ಇರುತ್ತದೆ. ನೀವು ನಿಮ್ಮ ಪ್ರಸ್ತುತ ಕೋರ್ಸಿನ ಆರಂಭಿಸುವುದು ಪುಟದಿಂದ ಅಧ್ಯಯನ ಪಠ್ಯವನ್ನು ಮರಳಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಡೌನ್‍ಲೋಡ್ ಮಾಡಿದ ಎಲ್ಲಾ ಫೈಲ್‍ಗಳನ್ನು ನಿಮ್ಮ ಕಂಪ್ಯೂಟರಿನಲ್ಲಿರುವ ಸುರಕ್ಷಿತ ಸ್ಥಳದಲ್ಲಿ ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದ ಆ ಫೈಲ್‍ಗಳ ಆಕ್ಸೆಸ್ ಅವಧಿ ಮೀರಿದರೂ ಅವು ನಿಮ್ಮ ಬಳಿಯಲ್ಲಿರುತ್ತವೆ.  ಕಂಪ್ಯೂಟರ್ ವೈಫಲ್ಯ ಕಂಡುಬಂದ ಸಂದರ್ಭದಲ್ಲಿ ಫೈಲ್‍ಗಳನ್ನು ಕಳೆದುಕೊಳ್ಳುವ ಅಪಾಯದಿಂದ ಪಾರಾಗಲು ಅವುಗಳ ಬ್ಯಾಕಪ್ ಪ್ರತಿಯನ್ನು ಇರಿಸಿಕೊಳ್ಳುವಂತೆ ಸಹ ನಾವು ನಿಮಗೆ ಸಲಹೆ ನೀಡುತ್ತೇವೆ.

Q.  ನಾನು ನನ್ನ ಅಧ್ಯಯನ ಪಠ್ಯದ ಡಿಜಿಟಲ್ ಪ್ರತಿಯನ್ನು ಕಳೆದುಕೊಂಡಿದ್ದೇನೆ ಮತ್ತು ನನ್ನ ಕೋರ್ಸ್ ಆಕ್ಸೆಸ್ ನ ಅವಧಿ ಮೀರಿದೆ. ನಾನು ಇನ್ನೊಂದು ಪ್ರತಿಯನ್ನು ಹೇಗೆ ಡೌನ್‍ಲೋಡ್ ಮಾಡಿಕೊಳ್ಳುವುದು?

ಕೋರ್ಸ್ ಮುಗಿದ ಬಳಿಕವೂ ಪಠ್ಯಸಾಮಗ್ರಿಗೆ ಆಕ್ಸೆಸ್ ಪಡೆಯಲು ಇರುವ ಒಂದೇ ವಿಧಾನವೆಂದರೆ ಸಣ್ಣ ಶುಲ್ಕ ಭರಿಸಿ ಕೋರ್ಸನ್ನು ನವೀಕರಿಸುವುದು. ನೀವು ನನ್ನ ಖಾತೆ ಪುಟದಿಂದ ಅದನ್ನು ಮಾಡಬಹುದು. ನೀವು ಪ್ರಸ್ತುತ ಬೇರೊಂದು ಕೋರ್ಸಿಗೆ ದಾಖಲಾತಿ ಪಡೆದಿದ್ದಲ್ಲಿ, ಇನ್ನೊಂದನ್ನು ನವೀಕರಿಸುವ ಮೊದಲು ಆ ಕೋರ್ಸನ್ನು ಮುಗಿಸಬೇಕು, ಏಕೆಂದರೆ ಒಮ್ಮೆ ನೀವು ಒಂದು ಕೋರ್ಸಿಗೆ ಮಾತ್ರ ದಾಖಲಾತಿ ಹೊಂದಬಹುದು. ಒಮ್ಮೆ ನೀವು ನಿಮ್ಮ ಕೋರ್ಸನ್ನು ನವೀಕರಿಸಿದ ಬಳಿಕ, ಕಳೆದುಹೋದ ಫೈಲುಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ನೀವು ಎಷ್ಟು ಪುಟಗಳಿಗೆ ಬೇಕಾದರೂ ಮರುಭೇಟಿ ನೀಡಬಹುದು.

Q.  ನನ್ನ ಪಾಸ್‍ವರ್ಡ್ ಮರೆತುಹೋಗಿದೆ. ನನ್ನ ಖಾತೆಗೆ ಹೇಗೆ ಹಿಂತಿರುಗುವುದು?

ನೀವು ನಿಮ್ಮ ಪಾಸ್‍ವರ್ಡ್ ಅನ್ನು ಇಲ್ಲಿ ರೀಸೆಟ್ ಮಾಡಿಕೊಳ್ಳಬಹುದು. ಒಮ್ಮೆ ನೀವು ನಿಮ್ಮ ಇಮೇಲ್ ವಿಳಾಸ ಅಥವಾ ಯೂಸರ್ ನೇಮ್ ಅನ್ನು ನಮೂದಿಸಿದ ಬಳಿಕ, ನಿಮ್ಮ ಪಾಸ್‍ವರ್ಡ್ ಅನ್ನು ರೀಸೆಟ್ ಮಾಡಲು ಒಂದು ಲಿಂಕ್‍ ಒಳಗೊಂಡಿರುವ ಇಮೇಲ್ ಅನ್ನು ನಾವು ಕಳುಹಿಸುತ್ತೇವೆ.

Q.  ನಾನು ಸೈನ್ ಅಪ್ ಆಗುವಾಗ ಬಳಸಿದ ಇಮೇಲ್ ಖಾತೆಗೆ ನಾನು ಈಗ ಆಕ್ಸೆಸ್ ಹೊಂದಿಲ್ಲ. ನನ್ನ ಖಾತೆಗೆ ಹೇಗೆ ಹಿಂತಿರುಗುವುದು?

ನೀವು ನಿಮ್ಮ ಹಳೆಯ ಇಮೇಲ್ ಖಾತೆಗೆ ಈಗ ಆಕ್ಸೆಸ್ ಹೊಂದಿರದಿದ್ದರೂ ಕೂಡ, ನೀವು ನಿಮ್ಮ ಹಳೆಯ ಇಮೇಲ್ ವಿಳಾಸ ನಮೂದಿಸಿ ವೆಬ್‍ಸೈಟ್ ಗೆ ಲಾಗಿನ್ ಆಗಬಹುದು.  ನಂತರ, ನಿಮ್ಮ ಖಾತೆಯನ್ನು ಹೊಸ ಇಮೇಲ್ ವಿಳಾಸಕ್ಕೆ ಬದಲಿಸಿಕೊಳ್ಳಲು  ನನ್ನ ಖಾತೆ ಪುಟದಿಂದ,  ನಿಮ್ಮ ಪಾಸ್‍ವರ್ಡ್ ಮತ್ತು ಖಾತೆಯ ವಿವರಗಳನ್ನು ತಿದ್ದುಪಡಿ ಮಾಡಿ ಅನ್ನು ಆಯ್ಕೆಮಾಡಿ. ಬಳಿಕ ನಿಮ್ಮ ಹೊಸ ಇಮೇಲ್ ವಿಳಾಸ ಬಳಸಿ ವೆಬ್‍ಸೈಟ್ ಗೆ ಲಾಗಿನ್ ಆಗಿ.

Q.  ನನ್ನ ಖಾತೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದೆ?

ಇಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ಖಾತೆ ಹೊಂದಿರಬೇಕು.

Q.  ನನ್ನ ಖಾತೆಯನ್ನು ಬೇರೊಬ್ಬರಿಗೆ ವರ್ಗಾಯಿಸಬಹುದೆ?

ಇಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ಖಾತೆ ಹೊಂದಿರಬೇಕು.

Q.  ನಾನು ಎಲ್ಲಿ ಬೆಂಬಲ ಪಡೆಯಬಹುದು?

ನಿಮ್ಮ ಪ್ರಶ್ನೆಗೆ ನಾವು ಈಗಾಗಲೇ ಉತ್ತರ ನೀಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ಈ ಪದೇಪದೇ ಕೇಳಲಾಗುವ ಪ್ರಶ್ನೆಗಳಲ್ಲಿ ಹುಡುಕಿ.  ನೀವು ಸ್ಥಳೀಯ TTS ಶಾಲೆ ಅಥವಾ ಅಧ್ಯಯನ ಗುಂಪಿನ ಭಾಗವಾಗಿದ್ದಲ್ಲಿ, ನೀವು ಗುಂಪಿನ ಡೀನ್ ಅಥವಾ ಗುಂಪಿನ ಒಬ್ಬ ಸದಸ್ಯರಲ್ಲಿ ಸಹಾಯ ಕೇಳಬಹುದು.  ನಿಮಗೆ ಇನ್ನೂ ಸಹಾಯ ಬೇಕಾದಲ್ಲಿ, ನೀವು ನಮ್ಮ ಬೆಂಬಲ ಪುಟದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ದಯವಿಟ್ಟು ಪ್ರತಿಕ್ರಿಯಿಸಲು ನಮಗೆ ಹಲವು ದಿನಗಳ ಅವಕಾಶ ನೀಡಿ, ವಿಶೇಷವಾಗಿ ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ  ಸಹಾಯಕ್ಕಾಗಿ ಬರೆದು ಕಳಿಸಿದಲ್ಲಿ ನಮಗೆ ಪ್ರತಿಕ್ರಿಯಿಸಲು ಕೆಲವು ದಿನಗಳು ಬೇಕಾಗಬಹುದು.